ಕೂನ್ - ರಿಚರ್ಡ್	
 	1900 - ಆಸ್ಟ್ರಿಯನ್-ಜರ್ಮನ್ ರಸಾಯನ ವಿಜ್ಞಾನಿ. ಜನನ 1900ರ ಡಿಸೆಂಬರ್ 3 ರಂದು ವಿಯನ್ನ ನಗರದಲ್ಲಿ. ವಿದ್ಯಾಭ್ಯಾಸ ನಡೆದದ್ದು ಜರ್ಮನಿಯ ಮ್ಯೂನಿಚ್ ವಿಶ್ವವಿದ್ಯಾಲಯದಲ್ಲಿ. ಜಗದ್ವಿಖ್ಯಾತ ಕಾರ್ಬನಿಕ ರಸಾಯನವಿಜ್ಞಾನಿ ರಿಚರ್ಡ್ ವಿಲ್‍ಸ್ಟೆಟರ್ (1872-1942) ಎಂಬಾತನೊಡನೆ ವ್ಯಾಸಂಗ ಮಾಡಿ ಮ್ಯೂನಿಕ್ ವಿಶ್ವವಿದ್ಯಾಲಯದ ಡಾಕ್ಟರೇಟ್ ಡಿಗ್ರಿ ಪಡೆದ(1922). ಕೆಲಕಾಲ ಮ್ಯೂನಿಕ್‍ನಲ್ಲೂ ಕೆಲಕಾಲ ಸ್ವಿಟ್ಸರ್ಲೆಂಡಿನ ಜûೂರಿಕ್‍ನಲ್ಲೂ ಕೆಲಸಮಾಡಿ, 1929ರಲ್ಲಿ ಹೈಡೆಲ್‍ಬರ್ಗ್‍ನಲ್ಲಿನ ಕೈಸರ್ ವಿಲ್‍ಹೆಲ್ಮ್ ಇನ್‍ಸ್ಟಿಟ್ಯೂಟ್‍ನಲ್ಲಿ ಪ್ರಾಧ್ಯಾಪಕ ಹುದ್ದೆಯನ್ನು ಸ್ವೀಕರಿಸಿದ. ಕೂನನ ಕಾರ್ಯಕ್ಷೇತ್ರ ಕಾರ್ಬನಿಕ ರಾಸಾಯನ ವಿಜ್ಞಾನ. ಕ್ಯಾರೊಟಿನ್ ಬಳಗದ ಸಂಯುಕ್ತಗಳು ಮತ್ತು ಕೆಲವು ವಿಟಮಿನ್‍ಗಳ ಅಣುರಚನೆಗಳನ್ನು ನಿರ್ಣಯಿಸುವುದರಲ್ಲಿ ಮತ್ತು ಅವನ್ನು ಸಂಶ್ಲೇಷಿಸುವುದರಲ್ಲಿ ಈತ ಗಮನಾರ್ಹ ಕೆಲಸ ಮಾಡಿದ್ದಾನೆ. ವಾಕೆನ್‍ರೋಡರ್ ಎಂಬಾತ ಕಳೆದ ಶತಮಾನದ ಪೂರ್ವಾರ್ಧದಲ್ಲಿ ಗೆಜ್ಜರಿಯಿಂದ (ಕ್ಯಾರಟ್) ಪ್ರತ್ಯೇಕಿಸಿದ ವರ್ಣ ದ್ರವ್ಯವನ್ನು ಕ್ಯಾರೋಟಿನ್ ಎಂದು ಕರೆದ. ಆದರೆ ಅದರ ರಸಾಯನಿಕ ಸ್ವರೂಪ ಪತ್ತೆಯಾಗಲು ಮುಕ್ಕಾಲು ಶತಮಾನ ಕಾಯಬೇಕಾಯಿತು. ಕೂನ್‍ನ ಗುರು ವಿಲ್‍ಸ್ಟೆಟರ್ ಕ್ಯಾರೊಟಿನ್‍ನ ಅಣುಸೂತ್ರ ಅ40ಊ56 ಎಂದು ನಿರ್ಣಯಿಸಿದ. (1907). ಇದು ಒಂದೇ ಒಂದು ಸಂಯುಕ್ತವಲ್ಲ, ಅದೇ ಅಣುಸೂತ್ರವಿರುವ ಮೂರು ಸಮಾಂಗಿಗಳ (ಐಸೊಮೆರ್ಸ್) ಮಿಶ್ರಣ ಎಂಬುದನ್ನು ಕೂನ್ 1929ರಲ್ಲಿ ಪತ್ತೆ ಮಾಡಿದ. ಬೇರೆ ಬೇರೆ ರಚನೆಯಿರುವ ಈ ಮೂರು ಸಂಯುಕ್ತಗಳಿಗೆ α- ಕ್ಯಾರೊಟಿನ್, β-ಕ್ಯಾರೊಟಿನ್, γ-ಕ್ಯಾರೊಟಿನ್ ಎಂಬ ಹೆಸರುಗಳನ್ನು ಕೊಡಲಾಯಿತು. ಅವುಗಳ ನಿಷ್ಕøಷ್ಟ ರಚನೆಗಳನ್ನೂ ಅದೇ ಬಳಗದ ಲೈಕೊಪೀನ್ (ಟೊಮ್ಯಾಟೊದಲ್ಲಿನ ವರ್ಣದ್ರವ್ಯ). ರಚನೆಯನ್ನೂ ನಿರ್ಣಯಿಸಿದಾತ ಕೂನ್. ಅಲ್ಲಿಂದ ಮುಂದಿನ ಮೂರು ನಾಲ್ಕು ವರ್ಷಗಳಲ್ಲಿ ಕ್ಯಾರೊಟಿನ್‍ಗೆ ಸಮೀಪ ಸಂಬಂಧಿಗಳಿಂದ ಇನ್ನೂ ಕೆಲವು ಸಂಯುಕ್ತಗಳ ರಚನೆಗಳನ್ನು ಸಹ ನಿರ್ಣಯಿಸಿದ. ಅವುಗಳಲ್ಲಿ ಕೇಸರಿಯಲ್ಲಿನ ಕ್ರೋಸೆಟಿನ್ ಮುಖ್ಯವಾದುದು. 

ಯಕೃತ್ತಿನಲ್ಲಿ ಕ್ಯಾರೊಟಿನ್‍ಗಳು ರಸಾಯನಿಕ ಪರಿವರ್ತನೆ ಹೊಂದಿ ವಿಟಮಿನ್ ಎ ಯನ್ನು ಉತ್ಪತ್ತಿಮಾಡುವುವೆಂದು ತಿಳಿದುಬಂದುದರಿಂದ ವಿಟಮಿನ್ ಎ ಯ ಅಣುರಚನೆಯನ್ನು ನಿರ್ಣಯಿಸುವುದು ಸುಲಭವಾಯಿತು. ಅದರ ಅಣುರಚನೆ ಖಚಿತವಾದ ತರುವಾಯ ಅದರ ಸಂಶ್ಲೇಷಣೆಗೆ ಪ್ರಯತ್ನಗಳು ನಡೆದುವು. ಕೂನ್‍ನೂ ಸ್ವಿಟ್ಜರ್‍ಲ್ಯಾಂಡಿನ ಪಾಲ್ ಕಾರರ್‍ನೂ (ನೋಡಿ- ಕಾರರ್,-ಪಾಲ್). ಸ್ವತಂತ್ರವಾಗಿ ವಿಟಮಿನ್ ಎ ಯನ್ನು ಸಂಶ್ಲೇಷಿಸುವುದರಲ್ಲಿ ಯಶಸ್ವಿಯಾದರು. ಕ್ಯಾರೊಟಿನ್‍ಗಳ ಮುಖಾಂತರ ವಿಟಮಿನ್‍ಗಳಲ್ಲಿ ಆಸಕ್ತನಾದ ಕೂನ್ ತರುವಾಯ ಇತರ ವಿಟಮಿನ್‍ಗಳ ಕಡೆಗೆ ಗಮನ ಹರಿಸಿದ ಎಂಬಂತೆ ಕಾಣುತ್ತದೆ. ಏಕೆಂದರೆ ಕ್ಯಾರೊಟಿನ್ ಮತ್ತು ವಿಟಮಿನ್ ಎ ಗಳಿಗೆ ಯಾವ ರಚನಾಸಂಬಂಧವೂ ಇಲ್ಲದಿರುವ ಬಿ ಗುಂಪಿನ ವಿಟಮಿನ್‍ಗಳ ಬಗ್ಗೆ ಕೂನ್ ಅಲ್ಲಿಂದ ಮುಂದೆ ಪ್ರಶಂಸಾರ್ಹ ಸಂಶೋಧನೆಗಳನ್ನು ನಡೆಸಿದ್ದಾನೆ. ವಿಟಮಿನ್ ಬಿ ಎಂದೂ ಕರೆಯುವ ರಿಬೊಫ್ಲಾವಿನ್ ಅಣುರಚನೆಯ ನಿರ್ಣಯದಲ್ಲಿ ಈತ ಗಣನೀಯ ಪಾತ್ರ ವಹಿಸಿದ. ಅದರ ಸಂಶ್ಲೇಷಣೆಯನ್ನು 1935ರಲ್ಲಿ  ಪುನಃ ಕಾರರ್‍ನೂ ಕೂನ್‍ನೂ ಸ್ವತಂತ್ರವಾಗಿ ಸಾಧಿಸಿದರು. ವಿಟಮಿನ್ ಬಿ ಎಂದು ಕರೆಯುವ ಪಿರಿಡಾಕ್ಸಿನ್ ಎಂಬ ಸಂಯುಕ್ತವನ್ನು 1938ರಲ್ಲಿ ಮೊತ್ತಮೊದಲ ಬಾರಿಗೆ ಶುದ್ಧರೂಪದಲ್ಲಿ ಪ್ರತ್ಯೇಕಿಸಿದಾತ ಕೂನ್. ಅನಂತರ ಅದರ ಅಣುರಚನೆಯನ್ನು ನಿರ್ಣಯಿಸಿದವನೂ ಇವನೇ. 1937ರಲ್ಲಿ ಪಾಲ್ ಕಾರರ್ ನೊಬೆಲ್ ಬಹುಮಾನವನ್ನು ಪಡೆದ. ಅದೇ ಕ್ಷೇತ್ರದಲ್ಲಿ ಅಷ್ಟೇ ವ್ಯಾಪಕವಾದ, ಅಷ್ಟೇ ಮಹತ್ತ್ವಪೂರಿತವಾದ ಮತ್ತು ಹೆಚ್ಚು ಕಡಿಮೆ ಕಾರರನ ಸಂಶೋಧನೆಗಳಿಗೆ ಪೂರಕವೆನಿಸುವ ಸಂಶೋಧನೆಗಳನ್ನು ನಡೆಸಿದ ಕೂನ್‍ನಿಗೆ ಮರುವರ್ಷವೇ, ಅಂದರೆ 1938ರಲ್ಲಿ, ನೊಬೆಲ್ ಬಹುಮಾನವನ್ನು ನೀಡಲಾಯಿತು. ಆದರೆ ನಾಜಿಗಳ ಆಗ್ರಹಕ್ಕೆ  ಪಾತ್ರನಾಗಿ ರಾಜಕೀಯ ಬಂಧಿಗಳ ಕೂಡು ಶಿಬಿರದಲ್ಲಿ (ಕಾನ್ಸಂಟ್ರೇಷನ್ ಕ್ಯಾಂಪ್) ತೊಳಲುತ್ತಿದ್ದ ಪ್ರಸಿದ್ದ ಜರ್ಮನ್ ಶಾಂತಿವಾದಿ ಕಾರ್ಲ್‍ಫಾನ್ ಅಸ್ಸೀಟ್‍ಸ್ಕಿ ಎಂಬಾತನಿಗೆ 1935ರ ನೊಬೆಲೆ ಶಾಂತಿ ಬಹುಮಾನವನ್ನು ನೀಡಿದ್ದಕ್ಕಾಗಿ ನೊಬೆಲ್ ಪ್ರತಿಷ್ಠಾನದ ಮೇಲೆ ಕೋಪಗೊಂಡಿದ್ದ ಹಿಟ್ಲರ್ ಜರ್ಮನ್ ರಾಷ್ಟ್ರೀಯರು ಯಾರೂ ನೊಬೆಲ್ ಬಹುಮಾನವನ್ನು ಸ್ವೀಕರಿಸಕೂಡದೆಂದು ನಿರ್ಬಂಧ ಹಾಕಿದ್ದುದರಿಂದ ಕೂನ್ ಬಹುಮಾನ ಸ್ವೀಕರಿಸುವುದು ಸಾಧ್ಯವಾಗಲಿಲ್ಲ. ಎರಡನೆಯ ಜಾಗತಿಕ ಯುದ್ಧ ಮುಗಿದ ತರುವಾಯ ಅವನನ್ನು ಗೌರವಿಸಿ ನೊಬೆಲ್ ಪದಕವನ್ನು ನೀಡಲಾಯಿತು. ಆದರೆ ಬಹುಮಾನದ ಹಣ ಮಾತ್ರ ಅವನಿಗೆ ಸಿಕ್ಕಲಿಲ್ಲ. 

ಪಾಶ್ಚರ್, ಪೇಟರ್ ನೊ ಮತ್ತು ಗಯಟೆ ಬಹುಮಾನಗಳೂ ಮುಂತಾಗಿ ಅನೇಕ ಬಹುಮಾನಗಳೂ ಭಾರತದ ಮುಖರ್ಚಿ ಚಿನ್ನದ ಪದಕವೂ ಈತನಿಗೆ ದೊರತಿವೆ. ಲೀಬಿಗ್ಸಾ ಅನಾಲ್ಸ್ ಡರ್ ಕೆಮೆ ಎಂಬ ನಿಯತಕಾಲಿಕದ ಸಂಪಾದಕನಾಗಿ ಸಹ ಕೂನ್ ಸೇವೆ ಸಲ್ಲಿಸಿದ್ದಾನೆ.                                                     (ಜೆ.ಆರ್.ಎಲ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ